ಅನುಬಂಧ
ನನ್ನ ಎದೆಯ ಮೇಲೆ ರೇಷಿಮೆಯಂಥ ಮೃದುವಾದ ವಸ್ತ್ರವೊಂದನ್ನು ಇರಿಸಿದಂತೆ ಭಾಸವಾಯಿತು. ನಾನು ನಿದ್ರೆಯಿಂದ ಎಚ್ಚೆತ್ತು ಗಮನಿಸಿದೆ, ಅವಳು ತನ್ನ ಕೋಮಲವಾದ ಕೈಯನ್ನು ನನ್ನ ಹೃದಯದ ಮಿಡಿತಗಳ ಮೇಲೆ ಇರಿಸಿದ್ದಾಳೆ. ಅವಳು ತನ್ನನ್ನು ತಾನು ನನ್ನ ತೀರಾ ಹತ್ತಿರಕ್ಕೆ ಜರುಗಿಸಿಕೊಂಡಿದ್ದಾಳೆ. ಬಳುಕುವ ಹೂಬಳ್ಳಿಯೊಂದು ಆಸರೆಗಾಗಿ ಮರವನ್ನು ತಬ್ಬಿಕೊಂಡಂತೆ ಅವಳು ನನ್ನನ್ನು ಬಿಗಿದಪ್ಪಿಕೊಂಡಿದ್ದಾಳೆ. ನನ್ನ ಹೃದಯದ ಬಡಿತ ತೀವ್ರಗೊಳ್ಳುತ್ತದೆ. ಆದರೆ ನಾನು ಆಶ್ಚರ್ಯಕರವಾಗಿ ಶಾಂತನಾಗಿದ್ದೇನೆ. ಅವಳ ನಿರ್ಮಲ, ಸುಂದರ ಮುಖವನ್ನು ಸಮೀಪದಿಂದ ನೋಡುತ್ತೇನೆ. ಅವಳು ಕಣ್ಣುಗಳು ತೃಪ್ತಿಯ ಆನಂದದ ಅಭಿವ್ಯಕ್ತಿಯಲ್ಲಿ ಮುಚ್ಚಿಕೊಂಡಿವೆ. ಪುಟ್ಟ ಮಗುವನ್ನು ತಬ್ಬಿಕೊಳ್ಳುವಂತೆ ನಾನು ಅವಳನ್ನು ನನ್ನ ಎದೆಗೊತ್ತಿಕೊಳ್ಳುತ್ತೇನೆ. ಅವಳ ಹೃದಯದ ಪ್ರತಿಯೊಂದು ಮಿಡಿತವೂ ನನ್ನ ಹೃದಯದ ಪ್ರತಿಧ್ವನಿಯೇನೋ ಎಂಬಂತೆ ಸಾಮ್ಯತೆಯಿಂದ ಬಡಿದುಕೊಳ್ಳುತ್ತದೆ. ಈ ಕ್ಷಣದಲ್ಲಿ ನಾನೇನು ಅನುಭವಿಸುತ್ತಿರುವೆನೋ ಅದನ್ನೇ ಅವಳ ಹೃದಯವೂ ಅನುಭವಿಸುತ್ತಿರುವಂತೆ ಭಾಸವಾಗುತ್ತದೆ. ನಾನು ತುಂಬಾ ಮೆಲ್ಲನೆ ಅವಳ ಹೆಸರನ್ನು ಕರೆಯುತ್ತೇನೆ. ನಿದ್ರೆಯ ಮೈ ಮರೆವಿನಲ್ಲೂ ಅವಳು ಹಾಡು ಹಕ್ಕಿಯ ರಾಗ ಮಾದುರ್ಯದಲ್ಲಿ ಶಾಂತವಾಗಿ ಉಲಿದಂತೆ ಭಾಸವಾಗುತ್ತದೆ. ನಾನು ಅವಳ ತಲೆಯನ್ನು ಅನುನಯದಿಂದ ನೇವರಿಸುತ್ತೇನೆ. ಅವಳ ಮುಖದ ಮೇಲಾಡುವ ದುಂಬಿ ಮುಂಗುರುಳುಗಳನ್ನು ಅಸೂಯೆಯಿಂದ ನೋಡುತ್ತೇನೆ. ಅವುಗಳನ್ನು ಎತ್ತಿ...