🌺ಗೆಳೆಯರು ನನ್ನ ಪಾಲಿಗೆ ಪ್ರಕೃತಿಯ ಮೇರುಕೃತಿ🌺
🌺ಈ ಕ್ಷಣ, ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನ ನೆನಪು ನನ್ನ ಸ್ಮ್ರತಿ ಪಟಲದ ಮುಂದೆ ಸ್ಥಬ್ಧ ಚಿತ್ರದಂತೆ ಸರಿದು ಹೋಯಿತು. ಅವತ್ತು ತರಗತಿಯಲ್ಲಿ ಮೇಷ್ಟ್ರು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದರು. ನನ್ನನ್ನು ಹೊರತು ಪಡಿಸಿ ಯಾರೊಬ್ಬರೂ ಉತ್ತರ ಹೇಳಿರಲಿಲ್ಲ. ಅವರನ್ನೆಲ್ಲ ಸಾಲಾಗಿ ನಿಲ್ಲಲು ಸೂಚಿಸಿದ ಮೇಷ್ಟ್ರು ಎಲ್ಲಾ ಮಕ್ಕಳಿಗೂ ಮೂಗು ಹಿಡಿದು ಕೆನ್ನೆಗೆ ಹೊಡೆಯುವಂತೆ ನನಗೆ ಆದೇಶಿಸಿದರು. ಎದುರಿಗಿದ್ದವರು ನನ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಆತ್ಮೀಯ ಗೆಳೆಯರು. ಅವರ ಕೆನ್ನೆಗೆ ಹೊಡೆಯುವ ಮಾತು ನನ್ನ ಕಲ್ಪನೆಯಲ್ಲೂ ಸುಳಿಯದ ವಿಚಾರವಾಗಿತ್ತು. ನಾನು ಕಲ್ಲಾಗಿ, ಕದಲದೇ ನಿಂತು ಬಿಟ್ಟಿದ್ದೆ. ಮೇಷ್ಟ್ರು ನನ್ನ ಬೆನ್ನ ಹಿಂದೆ ನಿಂತು ಬೆತ್ತವನ್ನು ಬೆನ್ನಿಗೆ ತಾಕಿಸಿ "ಬೇಗ ಹೊಡಿ,ಹೊಡಿಯದೇ ಹೋದರೆ ನಿನಗೆ ಬೀಳ್ತಾವೆ ನೊಡು" ಎಂದು ಹೆದರಿಸುತ್ತಿದ್ದರು. ಮೇಷ್ಟ್ರು ಹೇಳಿದ " ನಿನಗೆ ಬೀಳ್ತಾವೆ ನೋಡು" ಎನ್ನುವ ಮಾತುಗಳು ಆ ಕ್ಷಣದಲ್ಲಿ ನಾನು ಏನು ಮಾಡಬೇಕು ಎಂದು ನಿರ್ಧರಿಸಲು ನನಗೆ ಪ್ರೆರಣೆಯಾದವು. ನಾನು ಮೆಲ್ಲನೇ ಹೆಜ್ಜೆ ಹಾಕಿ ಒಬ್ಬೊಬ್ಬ ಗೆಳೆಯ- ಗೆಳತಿಯರ ಮೂಗನ್ನು ಅತ್ಯಂತ ಪ್ರೀತಿಯಿಂದ ಹಿಡಿದು ಅವರ ಕೆನ್ನೆಯನ್ನು ಮೃದುವಾಗಿ ತಾಕುತ್ತಾ ಹಾದು ಹೋದೆ. ಆಮೇಲೆ ನೇರವಾಗಿ ಹೋಗಿ ಮೇಷ್ಟ್ರ ಎದುರಿಗೆ ಕೈ ಮುಂದೆ ಮಾಡಿ ನಿಂತುಕೊಂಡೆ. ಎಲ್ಲರ ಕಣ್ಣುಗಳು ಮೇಷ್ಟ್ರ ಮೇಲೆ ಕೇಂದ್ರೀಕೃತ ವಾಗಿದ್ದವು. ಮೇಷ್ಟ್ರು ಕುರ್ಚಿಯಿಂದ ಎದ್ದು ನಿಂತು ನನ್ನ ಅಂಗೈ ಮೇಲೆ ಬೆತ್ತವನ್ನು ಇರಿಸಿದರು. ನನ್ನೆಲ್ಲ ಪ್ರೀತಿಯ ಪ್ರೀತಿಯ ಸ್ನೇಹಿತರು ಕಳವಳಗೊಂಡಿದ್ದರು. ಮುಂದೇನಾಗಬಹುದೆಂದು ಅವರು ಆತಂಕಗೊಂಡಿದ್ದರು. ಅವರ ಕಣ್ಣುಗಳು ತುಂಬಿ ಬಂದಿದ್ದವು. ಅವರನ್ನು ಸಾಲಾಗಿ ನಿಲ್ಲಿಸಿ ಅವರಿಗೆ ಹೊಡೆಯುವಂತೆ ಮೇಷ್ಟ್ರು ನನಗೆ ಹೇಳಿದಾಗ ಅವರ ಯಾರ ಮೊಗದಲ್ಲೂ ಆತಂಕವಾಗಲೀ, ಅಳುಕಾಗಲೀ ಇರಲಿಲ್ಲ. ನಾನು ಅವರ ಮೂಗು ಹಿಡಿಯಲು ಹೋದಾಗ, ಅವರ ತುಟಿಯ ಮೇಲೆ ಒಂದು ಬಾಡದ ಕಿರುನಗೆ ಅರಳಿಕೊಂಡಿತ್ತು. ಅದು ನಮ್ಮ ನಡುವಿನ ನಿರ್ಮಲ, ನಿಷ್ಕಲ್ಮಶ ಸ್ನೇಹದ ಪರಿಮಳ ಸೂಸುತ್ತಿತ್ತು. ಆದರೆ ಮೇಷ್ಟ್ರು ನನ್ನ ಅಂಗೈ ಮೇಲೆ ಬೆತ್ತ ಇರಿಸಿದ ಆ ಕ್ಷಣ ಅವರ ಹೃದಯ ಬಡಿದುಕೊಳ್ಳುತ್ತಿತ್ತು. ಅವರಿಗೇ ಬೆತ್ತದ ಏಟು ಬೀಳುತ್ತದೆಯೇನೋ ಎನ್ನುವಷ್ಟು ಅವರು ಅಳುಕಿದ್ದರು. ನಮ್ಮ ಮೇಷ್ಟ್ರು ಇದೆಲ್ಲವನ್ನೂ ಗಮನಿಸುತ್ತಿರುವಂತೆ ಭಾಸವಾಗುತ್ತಿತ್ತು. ಮೇಷ್ಟ್ರು ನನ್ನ ಅಂಗೈ ಮೇಲಿನಿಂದ ಬೆತ್ತವನ್ನು ಸರಿಸಿ, ನನ್ನನ್ನು ತಮ್ಮ ಬಳಿಗೆ ಪ್ರೀತಿಯಿಂದ ಸೆಳೆದುಕೊಂಡರು. ಅತ್ಯಂತ ಪ್ರೀತಿಯಿಂದ ನನ್ನ ತಲೆಯನ್ನು ನೇವರಿಸಿ " ನಾಳೆ ಎಲ್ಲವನ್ನೂ ಓದಿಕೊಂಡು ಬರುವಂತೆ ನಿನ್ನ ಗೆಳೆಯರಿಗೆ ಹೇಳು" ಎಂದರು. ಇವತ್ತು ಗೆಳೆಯರೊಬ್ಬರ ಅಂಚೆ ಬಾಲ್ಯದ ಆ ಕ್ಷಣಗಳನ್ನು ನನ್ನ ಭಾವಕೋಶದಿಂದ ಹೊರತಂದು ನೆನಪಿನಂಗಳದಲ್ಲಿ ಹರಡಿತು. ನನ್ನನ್ನು ಭಾವುಕನನ್ನಾಗಿಸಿತು. ಬಾಲ್ಯದ ಗೆಳೆಯರೆಂದರೆ ನನ್ನ ಪಾಲಿಗೆ ಶಬ್ದಗಳಾಗಲೊಲ್ಲದ ಒಂದು ಅಪೂರ್ವ ಅನುಭೂತಿ. ಅವರ ನೆನಪಿನಿಂದಾಗಿ ನನ್ನ ತುಟಿಯಿಂದ ಜಿನುಗಿದ ಒಂದು ಚಿಕ್ಕ ನಗು ಒಂದಿಡೀ ಬದುಕನ್ನು ಸ್ಪೂರ್ತಿಯಿಂದ, ಸಂತೋಷದಿಂದ ಬದುಕಲು ಸಾಕಾಗುತ್ತದೆ.
💝🌺❤🌹💐
🌺ಖಾದರ್ ಮೊಹಿಯೊದ್ದೀನ್.ಕೆ.ಎಸ್
Comments
Post a Comment