ನಿಸರ್ಗದ ಹಾಡು



               ಅವನು ಬದುಕಿದ್ದೇ ಹಾಗೆ ; ಎಂದೂ ಬತ್ತದ ಜೀವಕಾರುಣ್ಯದ ಚಿಲುಮೆಯಂತೆ. ಮರಿದುಂಬಿಯ ಮಧುರ ಝೇಂಕಾರಕ್ಕೆ ಒಡಲು ತೆರೆದು ಆಹ್ವಾನವೀಯುವ ಸುಕೋಮಲ ನವಸುಮವು ಸೂಸುವ ಪರಿಮಳದ ಘಮ್ಮೆನ್ನುವ ಘಮಲನ್ನು ಎದೆಯೊಳಗೆ ತುಂಬಿಟ್ಟುಕೊಂಡ ಚೆಲುವಾದ ಹೂಮನಸು ಅವನದು. ತನ್ನ ಸುತ್ತಲಿನ ಪರಿಸರವನ್ನು ಘಮಿಸುವಂತೆ ಮಾಡಲೋಸುಗ ಅವನು ತನ್ನ ಮೈಮನಸ್ಸನ್ನೆಲ್ಲ ಶ್ರೀಗಂಧದಂತೆ ತೇಯ್ದುಕೊಳ್ಳುತ್ತಿದ್ದ.

               ಅವನು ನಿಸರ್ಗದ ರಮ್ಯತೆಯ ಕುರಿತು ಮನದಣಿಯೆ ಮಾತಾಡುತ್ತಿದ್ದ. ಮನುಷ್ಯನ ಬದುಕಿಗೆ ಪ್ರಕೃತಿ ಕರುಣಿಸಿದ ಅಪಾರ ಕೊಡುಗೆಗಳನ್ನು ಪ್ರಾರ್ಥನೆ ಎಂಬಂತೆ ಕೊಂಡಾಡುತ್ತಿದ್ದ. ನಿಸರ್ಗದ ನಿಷ್ಕಲ್ಮಶ ನೀತಿ,  ಧಾರೆಯೆರೆದ ಪ್ರೀತಿ ಮತ್ತು ವರದಾನವಾಗಿ ನೀಡಿದ ಸ್ವಾತಂತ್ರ್ಯದಿಂದಾಗಿಯೇ ಮನುಷ್ಯ ನಾಗರಿಕನಾಗಿದ್ದು ಎಂದು ಸಾರುತ್ತಿದ್ದ. ಮನುಷ್ಯ ನಾಗರಿಕ ಸಮಾಜದ ಒಬ್ಬ ಸದಸ್ಯನಾಗಿದ್ದರೂ ಅವನು ' ಪ್ರಕೃತಿಯ ಮಡಿಲ ಕೂಸು '; ಪ್ರಕೃತಿಯನ್ನು ತಾಯಿಯಂತೆಯೇ ಆದರಿಸಬೇಕು, ತನ್ನನ್ನು ಸಲುಹುವ ತಾಯ ಮಮತೆಯ ಮಡಿಲು ಘಾಸಿಗೊಳ್ಳದಂತೆ ಜೋಪಾನ ಮಾಡಬೇಕು ಎಂದು ಪ್ರತಿಪಾದಿಸುತ್ತಿದ್ದ. ಪ್ರಕೃತಿ ಪ್ರೇಮ ಮನುಷ್ಯನ ಧಮನಿ ಧಮನಿಗಳಲ್ಲಿ ಢಾಳಾಗಿ ಸಂಚರಿಸಿ ಹಸಿರೇ ಉಸಿರಾಗಬೇಕೆಂದು ಹಂಬಲಿಸುತ್ತಿದ್ದ.

                ಕೆಲವೊಮ್ಮೆ ಅವನು ನಾಡಿನಿಂದ ಕಾಡಿಗೆ ಬರುವ ಆಧುನಿಕತೆಯನ್ನು ಪ್ರತಿನಿಧಿಸುವ ಪ್ರಕೃತಿ ಪ್ರೇಮಿಗಳನ್ನು ಸಂಧಿಸುತ್ತಿದ್ದ. ನಿಸರ್ಗದ ಕುರಿತಾದ ಅವರ ಅಧ್ಯಯನಶೀಲತೆ, ಜ್ಞಾನ, ಮತ್ತು ಬರೆದಿರುವ ದೊಡ್ಡ ದೊಡ್ಡ ಪುಸ್ತಕಗಳ ಬಗ್ಗೆ ಅವರು ಹೇಳುವಾಗ ಮೈಯೆಲ್ಲ ಕಿವಿಯಾಗಿಸಿಕೊಂಡು ಗಂಭೀರವಾಗಿ ಕೇಳಿಸಿಕೊಳ್ಳುತ್ತಿದ್ದ. ಆದರೆ ಅವರಾಡುವ ಭಾಷೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದೆ ಸೋತು ಅಸಹಾಯಕನಾಗುತ್ತಿದ್ದ. 

                ಅವನ ದೃಷ್ಟಿಯಲ್ಲಿ ಭೂಮಿಯೆಂದರೆ ಕೇವಲ ನೆಲ ಮತ್ತು ಜಲವಿರುವ ಭೂಪ್ರದೇಶ ಮಾತ್ರವಲ್ಲ. ಅದು ಬದುಕನ್ನು ಸುಂದರವಾಗಿ ಬದುಕುವ ಅಸಂಖ್ಯಾತ ಅವಕಾಶಗಳ ಅನನ್ಯ ದಾರಿ. ಅನುಭವಗಳ, ಅನುಭಾವಗಳ ಅಸಮಾನ ಆಗರ. ಜೀವ-ಜೀವಗಳ ಸ್ವರ ಸಂಚಾರದ ಅಪ್ರತಿಮ ಹಂದರ.

                  ಹಾಗಾಗಿ ಅವನು ಪ್ರಕೃತಿಯ ಮಡಿಲಲ್ಲಿ ಬಿದ್ದ ಬೀಜವೊಂದು ಪ್ರಾಕೃತಿಕವಾಗಿ ಮೊಳಕೆಯೊಡೆದು, ಚಿಗಿತು, ಸಹಜವಾಗಿ ಹಸಿರು ರೆಂಬೆ-ಕೊಂಬೆಗಳಾಗಿ ಟಿಸಿಲೊಡೆದು ಹೆಮ್ಮರವಾಗಿ ಬೆಳೆದು ನಿಲ್ಲವ ಪರಿಯನ್ನು ಹಾಡು ಕಟ್ಟಿ ಹಾಡುತ್ತಿದ್ದ. ಹಸಿರನ್ನು ಉಸಿರಾಗಿಸಿಕೊಂಡು ನೆತ್ತಿಯ ಮೇಲೆ ಹೊತ್ತು ಮೆರೆಯುವ ಬೆಟ್ಟ, ಗುಡ್ಡ, ಗಿರಿಶಿಖರಗಳ ವಿಹಂಗಮ ನೋಟವನ್ನು ವಿಸ್ಮಯದಿಂದ ನೋಡುತ್ತಿದ್ದ. ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಮನಮೋಹಕ, ದೇದೀಪ್ಯಮಾನ ಸಂಭ್ರಮವನ್ನು ಹೃನ್ಮನಗಳಿಂದ ಅನುಭವಿಸುತ್ತಿದ್ದ. ಹಸುರು ಚಿಗುರಿನ ಹುಲ್ಲುಗರಿಕೆಯ ನೆತ್ತಿಯ ಮೇಲೆ ಮುತ್ತಿನ ಮಣಿಗಳಂತೆ ಹೊಳೆದು, ನಲಿಯುವ ಹಿಮಬಿಂದುಗಳ ವರ್ಣಮಯ ಪ್ರತಿಫಲನದಲ್ಲಿ  ಮಗುವಾಗುತ್ತಿದ್ದ. ನಿರಭ್ರ ನೀಲಿಯಾಗಸದಲ್ಲಿ ತೇಲುವ ಬೆಳ್ಳಿ ಚಂದ್ರಮನ ತಾರುಣ್ಯವನ್ನು ಕಂಡು ತನ್ನ ಯೌವನವನ್ನು ಕನವರಿಸುತ್ತಿದ್ದ‌ . ಆಕಾಶದಂಗಳದಲ್ಲಿ ಹಚ್ಚಿಟ್ಟ ಕೋಟ್ಯಾಂತರ ದೀಪಗಳಂತೆ ಹೊಳೆದು ಬೆಳಗುವ ನಕ್ಷತ್ರ, ತಾರೆಗಳ ಹೂನಗೆಯ ಸಿಂಚನದಲ್ಲಿ ತೊಯ್ದು ಬೆಳಕಿನ ಹೊನಲಾಗುತ್ತಿದ್ದ‌ . ಅನಂತ ಸಾಗರದಲ್ಲಿ ಚಿನ್ನಾಟವಾಡುವ ಅಲೆಯಲೆಗಳ ಗರ್ಜನೆಯನ್ನು ಎದೆಯಲ್ಲಿ ತುಂಬಿಕೊಂಡು ಮಾರ್ದನಿಯಾಗುತ್ತಿದ್ದ. ಕೊಳದ ಪ್ರಶಾಂತತೆಯಲ್ಲಿ ಸುಳಿದಾಡುವ ನೀರಲೆಗಳ ಭಾವಗೀತೆಗೆ ರಾಗ ಬೆರೆಸುತ್ತಿದ್ದ. ಮಳೆ ಮಾರುತಗಳು ಹೊತ್ತು ತರುವ ಸರಿಗಮದ ತಂನನನಕ್ಕೆ ತಾಳ ಹಾಕುತ್ತಿದ್ದ. ಚಂಡಮಾರುತಗಳ ಗುಡುಗು ಸಿಡಿಲಿನ ಭೀತಗೊಳಿಸುವ ಭಯಂಕರ ಆರ್ಭಟಕ್ಕೆ ಎದೆಯೊಡ್ಡಿ ನಿಲ್ಲುತ್ತಿದ್ದ. ಧೋ ಎಂದು ಸುರಿಯುವ ಮಳೆಹನಿಯ ರುದ್ರಗಾನ, ಚಲಿಸುವ ಮೋಡಗಳ ಮೋಹಕ ಲಾವಣ್ಯ, ನಲಿಯುವ ಚಿಲುಮೆಗಳ ಕಾರಂಜಿಯ ಅಭ್ಯಂಜನ, ಜುಳು, ಜುಳು ಹರಿಯುವ ನದಿಯ ನೀರಿನಲೆಗಳ ಮಂಜುಳಗಾನ, ಧುಮ್ಮಿಕ್ಕುವ ಜಲಪಾತಗಳ ರುದ್ರ ರಮಣೀಯ ದರ್ಶನ, ಅರಳುವ ಹೂವುಗಳ ನಗುವಿನಲ್ಲಿ ಸೂಸುವ ಪರಿಮಳದ ಪರಿಭ್ರಮಣ, ಗಿಡಮರಗಳ ಟೊಂಗೆಗಳಲ್ಲಿ ಮಧುರವಾಗಿ ಹಾಡಿ ನಲಿಯುವ ಹಕ್ಕಿಗಳ ಇಂಚರದ ಮುದನೀಡುವ ಚುಂಬನ, ಬೀಸುವ ತಂಗಾಳಿಯ ತಂಪಾದ ಸ್ಪರ್ಶ, ಮರಿದುಂಬಿಗಳ ಝೇಂಕಾರ, ಭೂಮಿಯಾಗಸಗಳ ಮಿಲನ ಮಹೋತ್ಸವ,ಮೋಡದ ಬಾಗಿಲಿಗೆ ತೋರಣ ಕಟ್ಟುವ ಕಾಮನಬಿಲ್ಲಿನ ಕಾವ್ಯಾತ್ಮಕ ಕಥನ, ಗಾಳಿಯ ಚಲನೆಯಲ್ಲಿ ಸಾಗರದ ಸಂಭ್ರಮದಲ್ಲಿ, ರಸಭರಿತ ಫಲಗಳ ರಸಸ್ವಾದದ ಭೋಜನದಲ್ಲಿ, ಎಲ್ಲಿನೋಡಿದರಲ್ಲಿ ಭೂರಮೆಯ ಆಲಿಂಗನ;  ಒಂದೊಂದು ಪ್ರತ್ಯೇಕ ಗಿಡ, ಮರ, ಬಳ್ಳಿ ಪೊದೆ, ಬೆಟ್ಟಗುಡ್ಡ, ಗಿರಿಶಿಖರ, ಸಮುದ್ರ, ಸಾಗರ ನದಿ, ಕಣಿವೆ,ಹಳ್ಳ,ಕೊಳ್ಳ, ಕೆರೆ, ತೊರೆ, ಧುಮ್ಮಿಕ್ಕುವ ಜಲಧಾರೆಗಳು, ಪಶು, ಪಕ್ಷಿ, ಪ್ರಾಣಿ, ಜಲಚರಗಳೆಲ್ಲ ಒಂದುಗೂಡಿ ನಿಸರ್ಗ ರಮಣೀಯವಾದುದರ ಕುರಿತು ಭಾವಾವೇಶಕ್ಕೆ ಒಳಗಾದವನಂತೆ ಮಾತಾಡುತ್ತಿದ್ದ. ಅವನ ಹಾವಭಾವ ಗಳನ್ನು ಗಮನಿಸಿದಾಗ ಯಾರಿಗಾದರೂ ಸೊಬಗು ಸೂಸುವ ಪ್ರಕೃತಿಯ ಜೋಗುಳದಂಥ ಶಾಂತಿಯ ಮಧುರ ಹಾಡೊಂದನ್ನು ಕೇಳಿದ ಅನುಭವವಾಗುತ್ತಿತ್ತು.

                ಅವನ ದೃಷ್ಟಿಯಲ್ಲಿ ನಿಸರ್ಗವೆಂದರೆ ಶಾಂತಿಯ, ಸಮಾಧಾನದ, ಪ್ರೇಮದ, ಪವಿತ್ರತೆಯ, ಪ್ರಾಮಾಣಿಕತೆಯ, ಸಹಬಾಳ್ವೆಯ, ಸರಳತೆಯ ಆಲಯ. ದೇವರು, ನಂಬಿಕೆ , ಭರವಸೆ, ಭಕ್ತಿ ಮತ್ತು ಮೌಲ್ಯಗಳ ಬಹುದೊಡ್ಡ ಖಜಾನೆ. ಎಚ್ಚರಿಕೆಯಿಂದ ಬಳಸಿದರೆ ಎಂದೂ ಬರಿದಾಗದ ಅಕ್ಷಯಪಾತ್ರೆ. ಮನುಷ್ಯನ ಸಾಧನೆಯ ಬಲು ಸರಳ ರಹದಾರಿ. ಅದನ್ನು ಮುಕ್ಕಾಗಗೊಡದಂತೆ ಕಾಪಾಡಬೇಕೆನ್ನುವುದೇ ಅವನ ಕಳಕಳಿ.

                   ಅವನು ನಾಗರಿಕ ಸಮಾಜದ ' ಪುಣ್ಯಭೂಮಿ 'ಗಳ  ಬಗ್ಗೆ , ತೀರ್ಥಕ್ಷೇತ್ರಗಳ ಬಗ್ಗೆ , ಮಂದಿರ, ಮಸೀದಿ, ಚರ್ಚುಗಳ ಬಗ್ಗೆ, ಅನೇಕ ಪ್ರಾರ್ಥನಾ ಸ್ಥಳಗಳ ಬಗ್ಗೆ, ಸಾಧು-ಸಂತರ ಅಪಾರ ಮಹಿಮೆಯ ಬಗ್ಗೆ , ಅವರ ತತ್ವ, ಬೋಧನೆಗಳ ಬಗ್ಗೆ ಕೇಳಿ ತಿಳಿದು ಬೆರಗಾಗುತ್ತಿದ್ದ. ಆದರೆ ತಾನು ಮಾತ್ರ ಪ್ರಕೃತಿಯ ಮಡಿಲಲ್ಲೇ, ಬೆಳಗು ಬಯಲು ಆಲಯದಲ್ಲಿಯೇ ಎಲ್ಲವನ್ನೂ ಕಾಣುವುದಾಗಿ, ಪ್ರಕೃತಿಯಿಂದಲೇ ಎಲ್ಲವನ್ನೂ ಕಲಿಯುವುದಾಗಿ,ಪಡೆಯುವುದಾಗಿ ವಿನಮ್ರನಾಗುತ್ತಿದ್ದ.

                ವೃದ್ದಾಶ್ರಮಗಳ ಬಗ್ಗೆ, ದೊಡ್ಡ ದೊಡ್ಡ ಆಸ್ಪತ್ರೆಗಳ ಬಗ್ಗೆ,  ಬಂದೀಖಾನೆಗಳ ಬಗ್ಗೆ, ಶಿಕ್ಷಣ ಸಂಸ್ಥೆಗಳ ಬಗ್ಗೆ, ಆಣೆಕಟ್ಟೆ, ಕೃಷಿ, ನೀರಾವರಿ, ತಂತ್ರಜ್ಞಾನ ಮತ್ತು ಭವಿಷ್ಯದ ಜ್ಞಾನದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾ ನಾಗರಿಕ ಸಮಾಜದ ಸಾಧನಗಳ ಕುರಿತು ಕುತೂಹಲ ತಾಳುತ್ತಿದ್ದ. ತಾನು ಕಾಡಿನಲ್ಲಿ ಅನಾಗರಿಕನಾಗಿ ಉಳಿದದ್ದರ ಬಗ್ಗೆ ಅವನಿಗೆ ಹಲವು ಪ್ರಶ್ನೆಗಳು ಕಾಡುತ್ತಿದ್ದವು. ಏಕೆಂದರೆ ಒಮ್ಮೆ ಅವನು ನಾಗರಿಕ  ಮತ್ತು ಅನಾಗರಿಕನೆಂದರೆ ಯಾರು ? ಎಂದು ನಾಡಿನಿಂದ ಕಾಡಿನೆಡೆಗೆ ಬಂದವನಿಗೆ ಪ್ರಶ್ನಿಸಿದಾಗ ನಾಡಿನಲ್ಲಿರುವವರು ನಾಗರಿಕರು ಮತ್ತು ಕಾಡಿನಲ್ಲಿರುವವರು ಅನಾಗರಿಕರು ಎಂಬ ಉತ್ತರ ಕೇಳಿ ನೊಂದುಕೊಂಡಿದ್ದ.

                 ಆದರೆ ಅದೇ ನಾಗರಿಕರೆಂಬ ಆಧುನಿಕ ಮನುಷ್ಯರು ಚೆಲುವಾದ, ತನ್ನ ಜೀವ ಜೀವಾಳವಾದ, ಪವಿತ್ರವಾದ, ಶತಮಾನಗಳ ಕಾಲದ ಅವಧಿಯಲ್ಲಿ  ನಿಸರ್ಗವು ರೂಪುಗೊಂಡ ಪ್ರಕ್ರಿಯೆ ಮತ್ತು ಅದರ ಚಡಪಡಿಕೆಯ ಕುರಿತು ಅರಿಯುವ ಆಸಕ್ತಿ ತೋರದೆ ಯಾವ ಸೂಕ್ಷ್ಮ ಸಂವೇದನೆಗಳನ್ನು ಇರಿಸಿಕೊಳ್ಳದೆ ಮಾಡುತ್ತಿರುವ ಅತ್ಯಾಚಾರವನ್ನು ಕಂಡು ಕುದಿದುಹೋಗಿದ್ದ. ಕಣ್ಣೆದುರಿನಲ್ಲೇ ನಡೆಯುವ ವಿನಾಶದ ಬಗ್ಗೆ , ಮಾಡುತ್ತಿರುವ ಮಾಲಿನ್ಯದ ಬಗ್ಗೆ ಕಳವಳಗೊಳ್ಳುತ್ತಿದ್ದ. ಜೀವಿಯೊಂದು ಜನ್ಮತಾಳಿ ನಡೆದು ಬಂದ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕುವ ಹುನ್ನಾರದ ಬಗ್ಗೆ ತಲ್ಲಣಗೊಳ್ಳುತ್ತಿದ್ದ. ತಾನು ನಾಗರಿಕನಾಗದೆ ಪ್ರಕೃತಿಯ ಮಡಿಲಲ್ಲಿ ಅನಾಗರಿಕನಾಗಿರುವುದಕ್ಕೆ ಸಮಾಧಾನ ಪಟ್ಟುಕೊಳ್ಳುತ್ತಿದ್ದ. ನಿಸರ್ಗದೊಂದಿಗೆ ಬದುಕಿಡೀ ಬೆಸೆದುಕೊಂಡ ತನ್ನ ಬಂಧದ ಬಗ್ಗೆ, ಕಲ್ಪನೆಯನ್ನು ಮೀರಿದ ಅವಿನಾಭಾವ ಅನುಬಂಧದ ಬಗ್ಗೆ ನೆನೆದು ಹನಿಗಣ್ಣಾಗುತ್ತಿದ್ದ.

     ‌           ಒಂದುವೇಳೆ ನಿಸರ್ಗದ ಮೇಲೆ ನಡೆಯುವ ಅವ್ಯಾಹತ ದಾಳಿ ನಿಂತುಹೋಗಿ, ಕಲಷಿತಗೊಂಡ ಮನಸ್ಸುಗಳು ಮತ್ತು ಭೂಮಿ, ಆಕಾಶಗಳು ಮಾಲಿನ್ಯರಹಿತವಾಗಿ, ಭವ್ಯ ಪ್ರಕೃತಿಯು ಮತ್ತೊಮ್ಮೆ ಮೈದಾಳಿ, ಇಡೀ ವಾತಾವರಣ ಬದುಕಲು ಮತ್ತಷ್ಟು ಯೋಗ್ಯವಾಗಿ, ಹೊಸ ಜೀವಿಯೊಂದರ ಹುಟ್ಟಿಗೆ ಕಾರಣವಾದರೆ, ಅದರ ಮೃದುವಾದ ಪಾದಗಳು ಈ ಮಣ್ಣಿನ ಮೇಲೆ ಹೊಸಹೆಜ್ಜೆ ಗುರುತುಗಳನ್ನು ಮೂಡಿಸುವಂತಾದರೆ, ಹೊಸ ಪಯಣವೊಂದು ಆರಂಭವಾಗುತ್ತದೆ ಎಂದು ಕನಸುತ್ತಾನೆ. ಅವನ ಕನಸುಕಂಗಳಲ್ಲಿ ದೀಪಗಳು ಬೆಳಗುತ್ತವೆ. ಸುತ್ತಲೂ ಭರವಸೆಯ ಬೆಳಕು ಹರಡಿಕೊಳ್ಳುತ್ತದೆ.

ಖಾದರ್ ಮೊಹಿಯೊದ್ದೀನ್.ಕೆ.ಎಸ್
1ಸೆಪ್ಟೆಂಬರ್ 2023

Comments

Popular posts from this blog

🌺ಈ ಕವಿತೆ🌺

🌺ಅಮ್ಮ ಹಾಡಿದೊಂದು ಹಾಡು🌺