🌺ಈ ಕವಿತೆ🌺
🌺ಈ ಕವಿತೆ🌺
🌺
ನೀವು ನನ್ನೊಂದಿಗೆ ಸಂವಹನಕ್ಕೆ
ಇಳಿದಿದ್ದಾಗ ನನ್ನ ಹೃದಯದ ಕವಾಟದಿಂದ
ಇಣುಕಿ ತುಂಟ ನಗೆ ಚೆಲ್ಲಿದ ಒಂದು
ಭಾವ ಕುಸುಮ ಈ ಕವಿತೆ
🌹
ನೀವು ನನ್ನ ಭಾವ ಮಂದಿರದ ದ್ವಾರದಲ್ಲಿ
ನಿಂತಾಗ ಬಾಗಿಲು ತೆರೆದ ಭಾವಗಳು
ಸಂಭ್ರಮಿಸಿ, ನಿಮ್ಮನ್ನು ಸ್ವಾಗತಿಸಿ
ಬರಮಾಡಿಕೊಂಡ ಭಾವುಕ ಗಳಿಗೆ ಈ ಕವಿತೆ
🌺
ನೀವು ನನ್ನ ಬದುಕಿನ ಹೊಸ್ತಿಲು ದಾಟಿ
ನಿಮ್ಮೆದೆಯ ಭಾವ ಬಳ್ಳಿಯನು ನನ್ನೆದೆಗೆ ಹಬ್ಬಿಸಿ
ಬೆಳದಿಂಗಳ ಮೋಹಕ ನಗು ಚೆಲ್ಲಿದಾಗ
ಹೊಮ್ಮಿದ ಸಂತಸದ ಹೊನಲು ಈ ಕವಿತೆ
🌹
ನಿಮ್ಮ ದಾರಿಗುಂಟ ಹಾಸಿದ ಮಲ್ಲಿಗೆಯ ಹೂ ಹಾಸಿಗೆಯ
ಮೇಲೆ ಒಂದೊಂದೇ ಹೆಜ್ಜೆ ಇರಿಸಿ ನೀವು ನನ್ನ ಹೃದಯದ
ಆಳಕ್ಕೆ ಜಾರುತ್ತಿದ್ದಾಗ ನನ್ನ ಚಾಚಿದ ತೋಳುಗಳು
ನಿಮ್ಮ ಕೊರಳ ಮಾಲೆಯಾದ ಕ್ಷಣ ಈ ಕವಿತೆ
🌺
ನಿಮ್ಮ ಕಡೆದಿಟ್ಟ ರೂಪರಾಶಿಯ ಮೇಲೆ ನನ್ನ ಬೆರಳುಗಳು
ಹರಿದಾಡಿ ಕವಿತೆ ಬರೆಯುತ್ತಿದ್ದಾಗ ಮೂಡಿದ ನಿಮ್ಮ ಕೆನ್ನೆಯ ಮೇಲಿನ ನಾಚಿಕೆಗೆ ಕಾಮನಬಿಲ್ಲು ರಂಗು ಬಳಿದು ಸ್ವಪ್ನ ಲೋಕಕ್ಕೆ ಕರೆದೊಯ್ಯುತ್ತಿದ್ದಾಗ ತುಳುಕಿದ ಭಾವ ಈ ಕವಿತೆ
🌹
ನೀವು ನನ್ನೆದೆಯ ಹರುವಿನ ಮೇಲೆ ತಲೆ ಇಟ್ಟು
ಭಾವಗೀತೆಗೆ ರಾಗ ಹೊಂದಿಸಿ,ಉಸುರಿಗೆ ಉಸಿರು ತಾಕಿಸಿ ಭಾವನೆಗಳ ತಿದಿಯೊತ್ತಿ ಭಾವ ತಂತುಗಳನ್ನು ಮೀಂಟಿದಾಗ ಮಿಡಿದ ಹೃದಯ ವೀಣೆಯ ಝೇಂಕಾರ ಈ ಕವಿತೆ
🌺
ನಿಮ್ಮ ದುಂಬಿ ಮುಂಗುರನ್ನು ಮೃದುವಾಗಿ ಸೋಕಿ
ಹಣೆಯ ಮೇಲೆ ಮುತ್ತುಗಳ ಮಳೆ ಗರೆಯುತ್ತಿದ್ದಾಗ
ನಿಮ್ಮ ಕಣ್ಣಂಚಿನಲ್ಲಿ ತುಳುಕಿದ ಆನಂದಭಾಷ್ಪ ಕೆನ್ನೆ
ಇಳಿಜಾರಿನಲ್ಲಿ ಜಾರಿ ಹೊನಲಾದ ಕ್ಷಣ ಈ ಕವಿತೆ
🌹🌺💝🌷
🌺ಖಾದರ್ ಮೊಹಿಯೊದ್ದೀನ್.ಕೆ.ಎಸ್
Comments
Post a Comment