🌺ಬರವಣಿಗೆ ಎಂದರೆ ಏಕಾಂತದೊಂದಿಗಿನ ಸಂವಾದ🌺 🌺ಒಂದು ತಪಸ್ಸು 🌺ಸಾಕ್ಷಾತ್ಕಾರ🌺🌹



              🌺ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮೋಹ ಇದೆಯಲ್ಲ ; ಅದು ಅಷ್ಟು ಸುಲಭವಾಗಿ ಎಲ್ಲರಿಗೂ ದಕ್ಕುವಂಥದ್ದಲ್ಲ. ಅದು ಏಕಾಂತದೊಂದಿಗಿನ ಮುಖಾಮುಖಿ. ಅದನ್ನು ಯಾರು ಯಾರಿಗೂ ಕಲಿಸಿಕೊಡಲು ಸಾಧ್ಯವೂ ಇಲ್ಲ. ಬರಹಗಾರನೊಬ್ಬ ಏಕಾಂತತೆಯೊಂದಿಗಿನ ಸಂವಾದದಲ್ಲಿ ಅನಂತತೆಯಲ್ಲಿ ಲೀನನಾಗುತ್ತಾನೆ. ಸೃಷ್ಟಿಯೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತಾನೆ. ಅನನ್ಯ ಸೃಷ್ಟಿಗಾಗಿ ಹಂಬಲಿಸಿ ಸೃಷ್ಟಿಯೇ ತಾನಾಗಿಹೋಗುತ್ತಾನೆ. ಹೊಸದಾದ ಸೃಜನಶೀಲ ಸೃಷ್ಟಿಯನ್ನು ಸೃಜಿಸುತ್ತಾನೆ. ಇದೊಂದು ತಾಪಸನ ಪರಿಕ್ರಮ. ಅದೊಂದು ಅಪರೂಪದ, ಅಮೂಲ್ಯ ಉಡುಗೊರೆಯೇ ಇರಬೇಕು !

          🌺ನೀವು ಈ ಮಳೆ ಹನಿಯ ಮಾಧುರ್ಯವನ್ನು ಕೇಳಿಸಿಕೊಂಡೇ ಇರುತ್ತೀರಿ. ಅದು ಸೃಷ್ಟಿಸುವ ನಾದ ಮಾಧುರ್ಯ ನಿಮ್ಮ ಹೃದಯ ಮತ್ತು ಮನಸ್ಸುಗಳನ್ನು ಮತ್ತಷ್ಟು ಮಾಧುರ್ಯ ಪೂರ್ಣ ಗೊಳಿಸಿರುವುದನ್ನು ನೀವು ಅನುಭವಿಸಿಯೇ ಇರುತ್ತೀರಿ ! ಅಂತಹ ಭಾವಮಯ ಸಂದರ್ಭದಲ್ಲಿ ನಿಮ್ಮೊಳಗೊಂದು ಕಾವ್ಯದ ಊಟೆ ಚಿಮ್ಮಿದರೆ !? ಅದು ಝರಿಯಾಗಿ ಹರಿದು ನಿಮ್ಮ ಹೃದಯದ ಮೂಲೆ ಮೂಲೆಗಳಲ್ಲಿ ಪಯಣಿಸಿ, ನಿಮ್ಮ ಎದೆಯ ನೆಲವನ್ನು ಹದಗೊಳಿಸಿ ನಿಮ್ಮನ್ನು ಭಾವನಾತ್ಮಕ ಲೋಕವೊಂದಕ್ಕೆ ಸೆಳೆದೊಯ್ದರೆ !? ಅಲ್ಲಿ ಆ ಲೋಕದಲ್ಲಿ ಕವಿತೆಯೊಂದು ಕಣ್ಣು ಮಿಟುಕಿಸಿ ಕಿರುನಗೆ ಚೆಲ್ಲಿದರೆ !? ಅದು ಸೃಜನಶೀಲ ಬರಹಗಾರನೊಬ್ಬ ಸಾಕ್ಷಾತ್ಕರಿಸಿಕೊಂಡ ಕನಸುಗಳ ಲೋಕವೇ ಆಗಿರುತ್ತದೆ.

              🌺ಸಂವೇದನೆಗಳೊಂದಿಗೆ ಬರಹಗಾರನೊಬ್ಬನ ಲೇಖನಿಯು ಸರಸವಾಡಲು ತೊಡಗಿದಾಗ ಭಾವಗೀತಾತ್ಮಕತೆಯ ಕಲ್ಪನಾಶೀಲತೆ ಸೃಜನಶೀಲತೆಯ ದಾರಿಯಲ್ಲಿ ಸಾಗಿ ಬರಹದ ರೂಪ ಪಡೆಯುತ್ತದೆ. ಕಲ್ಪನೆಯು ಸೌಂದರ್ಯದ ಎಲ್ಲೆ ಮೀರಿ ಕಾವ್ಯ ಕಾರಂಜಿಯಾಗುತ್ತದೆ. ಕವಿತೆ ನಾಟ್ಯ ಆಡುತ್ತದೆ. ಪದ್ಯ ಪದಗಳ ಸಮ್ಮುಖದಲ್ಲಿ ಹಾಡಾಗಿ ಹರಿಯುತ್ತದೆ.

             🌺ಹೀಗೆ ಸೃಷ್ಟಿಯಾದ ಬರಹಗಳು ಅಷ್ಟು ಸುಲಭವಾಗಿ ವಿಮರ್ಶೆ, ವಿಶ್ಲೇಷಣೆಗಳಿಗೆ ದಕ್ಕುವುದಿಲ್ಲ. ನೀವು ಓದಿದಷ್ಟು ಬಾರಿ ಅವು ನಿಮ್ಮ ಮುಂದೆ ಹೊಸ ಹೊಸ ಹೊಳಹುಗಳನ್ನು ತೆರೆದಿಡುತ್ತವೆ. ಅದೇ ಅವುಗಳ ವಿಶೇಷತೆ. ಇಂತಹ ಬರಹಗಳು ನಿಮಗೆ ಬದುಕಿನ ಅನಂತತೆಯ ದರ್ಶನ ಮಾಡಿಸುತ್ತವೆ. ಅದು ಬರಹಗಾರನೊಬ್ಬ ಕಂಡ ಬದುಕಿನ ವಿವಿಧ ಆಯಾಮಗಳ ವಿಶಾಲ ಒಳನೋಟ. ಅವನ ಅನುಭವ, ಅನುಭೂತಿ, ಕಲ್ಪನಾಶೀಲತೆ, ತಾದ್ಯಾತ್ಮತೆ, ತನ್ಮಯತೆಗಳಿಂದ ಕಟ್ಟಿಕೊಂಡ ಅಕ್ಷರ ಲೋಕವದು !

           🌺ನಿಜ ಹೇಳಬೇಕೆಂದರೆ, ಪ್ರತಿಭಾವಂತ ಲೇಖಕನೊಬ್ಬ ತನ್ನ ಬರಹಗಳ ವಿಮರ್ಶಕನೂ, ಅಂತರಂಗದ ವಿಶ್ಲೇಶಕನೂ ಆಗಿರುತ್ತಾನೆ. ತನ್ನ ಒಳ ದನಿಯನ್ನು ತಾನೇ ಕೇಳಿಸಿಕೊಳ್ಳುವಷ್ಟು ಸೂಕ್ಷ್ಮತೆಯನ್ನು ಹೊಂದಿರುತ್ತಾನೆ. ತನ್ನ ಹೃದಯವೆಂಬ ನ್ಯಾಯ ದೇಗುಲದಲ್ಲಿ  ತನ್ನನ್ನು ತಾನೇ ಕಟಕಟೆಯಲ್ಲಿ ನಿಲ್ಲಿಸಿ ನ್ಯಾಯ, ಅನ್ಯಾಯಗಳ ಪರಾಮರ್ಶೆ ಮಾಡಿಕೊಳ್ಳುತ್ತಾನೆ. ಅಂತಹ ಸತ್ಯಸಂಧ ಸಾಹಿತ್ಯಪೂಜಾರಿ ಮಾತ್ರ ಜನಮನವನ್ನು ತಲುಪಿ ಅಲ್ಲಿ ಒಂದು ಗೌರವದ ಸ್ಥಾನವನ್ನು ಪಡೆಯುತ್ತಾನೆ.

        🌺ಬರವಣಿಗೆಯನ್ನು ಒಂದು ತಪಸ್ಸು ಎಂದು ಹೇಳುತ್ತಾರೆ. ಈ ತಪಸ್ಸು ನಿರ್ವಿಘ್ನವಾಗಿ ಸಾಗಿ  ಸಾಕ್ಷಾತ್ಕಾರದ ಗಳಿಗೆಯನ್ನು ಎದುರ್ಗೊಳ್ಳಬೇಕೆಂದರೆ ಏಕಾಂತ, ಏಕಾಂಗಿತನ ಅನಿವಾರ್ಯ. ಇಂತಹ ಕ್ಷಣದಲ್ಲಿ ಮಾತುಗಳು ಮರೆತು ಹೋಗಿ ಭಾವನೆಗಳು ಹಾಡಾಗಿ ಹರಿಯುತ್ತವೆ. ಅಕ್ಷರಗಳು ನಾಟ್ಯವಾಡುತ್ತವೆ. ಸೌಂದರ್ಯವೇ ರೂಪಕವಾಗುವ ದಿವ್ಯ ಲೋಕವೊಂದರ  ದಿಗ್ದರ್ಶನವಾಗುತ್ತದೆ. ಸಾಹಿತ್ಯದ ಹೊನಲು ಹರಿಯುತ್ತದೆ. ಹೀಗೆ ಹರಿದು ಸಾಕ್ಷಾತ್ಕಾರವಾದದ್ದು ಸಾಹಿತ್ಯ ಎಂದು ಕರೆಯಿಸಿಕೊಳ್ಳುತ್ತದೆ. 


🌺 ಖಾದರ್ ಮೊಹಿಯೊದ್ದೀನ್.ಕೆ.ಎಸ್
26 ಅಗಷ್ಟ್ 2023

Comments

Popular posts from this blog

🌺ಈ ಕವಿತೆ🌺

ನಿಸರ್ಗದ ಹಾಡು

🌺ಅಮ್ಮ ಹಾಡಿದೊಂದು ಹಾಡು🌺