ಅನುಬಂಧ

ನನ್ನ ಎದೆಯ ಮೇಲೆ ರೇಷಿಮೆಯಂಥ ಮೃದುವಾದ ವಸ್ತ್ರವೊಂದನ್ನು ಇರಿಸಿದಂತೆ ಭಾಸವಾಯಿತು. ನಾನು ನಿದ್ರೆಯಿಂದ ಎಚ್ಚೆತ್ತು ಗಮನಿಸಿದೆ, ಅವಳು ತನ್ನ ಕೋಮಲವಾದ ಕೈಯನ್ನು ನನ್ನ ಹೃದಯದ ಮಿಡಿತಗಳ ಮೇಲೆ ಇರಿಸಿದ್ದಾಳೆ. ಅವಳು ತನ್ನನ್ನು ತಾನು ನನ್ನ ತೀರಾ ಹತ್ತಿರಕ್ಕೆ ಜರುಗಿಸಿಕೊಂಡಿದ್ದಾಳೆ. ಬಳುಕುವ ಹೂಬಳ್ಳಿಯೊಂದು ಆಸರೆಗಾಗಿ ಮರವನ್ನು ತಬ್ಬಿಕೊಂಡಂತೆ ಅವಳು ನನ್ನನ್ನು ಬಿಗಿದಪ್ಪಿಕೊಂಡಿದ್ದಾಳೆ. ನನ್ನ ಹೃದಯದ ಬಡಿತ ತೀವ್ರಗೊಳ್ಳುತ್ತದೆ. ಆದರೆ ನಾನು ಆಶ್ಚರ್ಯಕರವಾಗಿ ಶಾಂತನಾಗಿದ್ದೇನೆ. ಅವಳ ನಿರ್ಮಲ, ಸುಂದರ ಮುಖವನ್ನು ಸಮೀಪದಿಂದ ನೋಡುತ್ತೇನೆ‌. ಅವಳು ಕಣ್ಣುಗಳು ತೃಪ್ತಿಯ ಆನಂದದ ಅಭಿವ್ಯಕ್ತಿಯಲ್ಲಿ ಮುಚ್ಚಿಕೊಂಡಿವೆ. ಪುಟ್ಟ ಮಗುವನ್ನು ತಬ್ಬಿಕೊಳ್ಳುವಂತೆ ನಾನು ಅವಳನ್ನು ನನ್ನ ಎದೆಗೊತ್ತಿಕೊಳ್ಳುತ್ತೇನೆ. ಅವಳ ಹೃದಯದ ಪ್ರತಿಯೊಂದು ಮಿಡಿತವೂ ನನ್ನ ಹೃದಯದ ಪ್ರತಿಧ್ವನಿಯೇನೋ ಎಂಬಂತೆ ಸಾಮ್ಯತೆಯಿಂದ ಬಡಿದುಕೊಳ್ಳುತ್ತದೆ. ಈ ಕ್ಷಣದಲ್ಲಿ ನಾನೇನು ಅನುಭವಿಸುತ್ತಿರುವೆನೋ ಅದನ್ನೇ ಅವಳ ಹೃದಯವೂ ಅನುಭವಿಸುತ್ತಿರುವಂತೆ ಭಾಸವಾಗುತ್ತದೆ. ನಾನು ತುಂಬಾ ಮೆಲ್ಲನೆ ಅವಳ ಹೆಸರನ್ನು ಕರೆಯುತ್ತೇನೆ. ನಿದ್ರೆಯ ಮೈ ಮರೆವಿನಲ್ಲೂ ಅವಳು ಹಾಡು ಹಕ್ಕಿಯ ರಾಗ ಮಾದುರ್ಯದಲ್ಲಿ ಶಾಂತವಾಗಿ ಉಲಿದಂತೆ ಭಾಸವಾಗುತ್ತದೆ. ನಾನು ಅವಳ ತಲೆಯನ್ನು ಅನುನಯದಿಂದ ನೇವರಿಸುತ್ತೇನೆ. ಅವಳ ಮುಖದ ಮೇಲಾಡುವ ದುಂಬಿ ಮುಂಗುರುಳುಗಳನ್ನು ಅಸೂಯೆಯಿಂದ ನೋಡುತ್ತೇನೆ. ಅವುಗಳನ್ನು ಎತ್ತಿ ಅವಳ ಕಿವಿಯ ಹಿಂಭಾಗದಲ್ಲಿ ಮರಳಿ, ಮರಳಿ ಸಿಕ್ಕಿಸುವ ವ್ಯರ್ಥ ಪ್ರಯತ್ನ ಮಾಡಿ ಸೋಲುತ್ತೇನೆ.  ನನ್ನ ಕುಚೇಷ್ಟೆಗಳು ಅವಳಿಗೆ ಕಚಗುಳಿ ಇಟ್ಟಂತಾಗಿ ಅವಳು ತಲೆಯನ್ನು ಎತ್ತುತ್ತಾ ಕಣ್ಣು ತೆರೆಯುತ್ತಾಳೆ. ಅವಳ ಕಣ್ಣುಗಳು ಸುಂದರವಾಗಿವೆ. ಅದೀಗ ತಾನೇ ಅರಳಿದ ಕೊಳದ ಕಮಲಗಳಷ್ಟು ಶುಭ್ರವಾಗಿವೆ. ಅವುಗಳಲ್ಲಿ ಕೇವಲ, ಕೇವಲ ನಿರ್ಮಲ, ನಿಷ್ಕಾಮ ಭಾವಗಳು ಅಲೆ, ಅಲೆಯಾಗಿ ಹೊಮ್ಮುತ್ತವೆ. ಅವುಗಳಲ್ಲಿ ಯಾವುದೇ ತರಹದ ನಟನೆಯ ನೆರಳುಗಳಿಲ್ಲ. ಬೂಟಾಟಿಕೆಯ ಸುಳಿವುಗಳಿಲ್ಲ. ನನ್ನನ್ನು ನಿರುತ್ಸಾಹಗೊಳಿಸುವ ಯಾವ ಪಿತೂರಿಯೂ ಇಲ್ಲ. ಅವು ವಿಶಾಲ ಶಾಂತ ಸಾಗರದಂತೆ ಅಕರ್ಷಕವಾಗಿವೆ. ನಾನು ಅವುಗಳಲ್ಲಿ ಆಳವಾಗಿ ಇಣುಕುತ್ತೇನೆ. ಅವುಗಳು ಅವಳ ಹೃದಯದ ಕವಾಟಗಳು; ನಾನು ಅವುಗಳ ಮೂಲಕ ಅವಳ ಅಂತರಾತ್ಮವನ್ನು ಕಾಣುತ್ತೇನೆ. ನಾನು ಅವಳ ಮುಖವನ್ನು ಅಂಗೈಯಲ್ಲಿ ಎತ್ತಿಕೊಳ್ಳುತ್ತೇನೆ. ಬಲು ಪ್ರೀತಿಯಿಂದ ನನ್ನ ತುಟಿಗಳನ್ನು ಅವಳ ತುಟಿಗಳಿಗೆ ಸೇರಿಸುತ್ತೇನೆ. ವೀಣೆಯ ತಂತಿಗಳನ್ನು ಮೀಂಟಿದಾಗ ಉಂಟಾಗುವ ಮಧುರ ಝೇಂಕಾರ ಅವಳ ದೇಹದ ನರನಾಡಿಗಳಿಂದ ಹರಿದುಬಂದತೆ ಭಾಸವಾಗುತ್ತದೆ. ಅವಳ ತುಟಿಗಳು ಗುಲಾಬಿಯ ಪಕಳೆಗಳಂತೆ ಕೋಮಲವಾಗಿಯೂ ತಂಪಾಗಿಯೂ ಇರುತ್ತವೆ. ತುಂಬಾ ಸೂಕ್ಷ್ಮ ಮತ್ತು ತುಂಬಾ ನಯವಾಗಿ ಅರಳೆಯ ಎಳೆಗಳ ಸೌಮ್ಯತೆಯನ್ನು ಹೊಂದಿರುತ್ತವೆ. ಕಾಡು ಹೂವುಗಳ ಪರಿಮಳ, ಒದ್ದೆಯಾದ ಮಣ್ಣ ಘಮ ಮತ್ತು ಹೊಸದಾಗಿ ಚಿಗುರಿದ ಎಳೆ ಹುಲ್ಲಿನ ಸುವಾಸನೆ ಅವಳ ಮೈಯಿಂದ ಹೊಮ್ಮುತ್ತದೆ. ಅದು ನನ್ನನ್ನು ಮತ್ತಷ್ಟು ಅವಳ ಬಳಿ ಸಾರಲು ಪ್ರೇರೇಪಿಸುತ್ತದೆ. ನಾನು ನನ್ನ ತುಟಿಗಳನ್ನು ಅವಳ ತುಟಿಗಳ ಮೇಲೆ ಬಲವಾಗಿ ಒತ್ತಿ, ಅವಳನ್ನು ದೀರ್ಘವಾಗಿ ಚುಂಬಿಸುತ್ತಾ ಮಕರಂದವನ್ನು ಹೀರುತ್ತೇನೆ. ಅವಳೂ ನನ್ನ ತುಟಿಗಳ ಸವಿಯನ್ನು ಅನುಭವಿಸುವಾಗ ಸಂತೃಪ್ತಿಯ ಸೆಳಕೊಂದು ನನ್ನೊಳಗೆ ಹಾದು ಹೋಗುತ್ತದೆ. ನನ್ನ ಮುತ್ತು ಮತ್ತಷ್ಟು ಆಳವಾಗುತ್ತದೆ. ನನ್ನ ಕೈ ಅವಳ ಕೋಮಲ ಕೆನ್ನೆಗಳ ಮೇಲೆ ಜಾರುತ್ತದೆ. ನಾನು ಅವುಗಳ ಮೇಲೆ ಹೂ ಮುತ್ತುಗಳನ್ನು ನೀಡುತ್ತೇನೆ. ಅವಳ ಬೆರಳುಗಳು ನನ್ನ ತಲೆಗೂದಲಿನೊಂದಿಗೆ ಮಾತಿಗಿಳಿಯುತ್ತವೆ. ನನ್ನ ಕತ್ತಿನ ಹಿಂಭಾಗ ಸಾವಿರ ಕಥೆಗಳನ್ನು ಹೇಳತೊಡಗುತ್ತದೆ. ಇದು ನಾವಿಬ್ಬರೂ ಪರಸ್ಪರ ಮುತ್ತುಗಳನ್ನು ಬದಲಾಯಿಸಿಕೊಳ್ಳುವುದರ ಮೂಲಕ ಬರೆದ ಮೊದಲ ಶೃಂಗಾರ ರಸಕಾವ್ಯ. ನಾವು ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರ ಮುಖದ ಹತ್ತಿರ ತರುತ್ತೇವೆ. ನಾವು ತುಟಿಗಳ ಮೂಲಕ ಪರಸ್ಪರ ಹಣೆಗಳನ್ನು ಸ್ಪರ್ಶಿಸುತ್ತೇವೆ‌. ನಾನು ಅವಳ ಕಣ್ಣುಗಳಲ್ಲಿ ಇಣುಕುತ್ತೇನೆ. ಅವುಗಳು ಹೆಚ್ಚು ಶಾಂತ ಮತ್ತು ಕುತೂಹಲದಿಂದ ತುಂಬಿರುತ್ತವೆ. ಅವಳು ನನ್ನ ಕಣ್ಣುಗಳನ್ನು ಬೇಟೆಯಾಡಿ "ಇವುಗಳಲ್ಲಿ ಇರುವುದೇನು" ಎಂದು ಕೇಳುತ್ತಾಳೆ. ಅವಳ ಇನಿ ದನಿಯ ಮಾರ್ದವತೆಗೆ ನಾನು ಮಾರುಹೋಗುತ್ತೇನೆ. ನಾನು ಅವಳನ್ನು ಮಾತಾಡಗೊಡದೆ ಅವಳ ತುಟಿಗಳ ಮೇಲೆ ನನ್ನ ತುಟಿಗಳನ್ನು ಒತ್ತುತ್ತೇನೆ. ಅವಳು ರೋಮಾಂಚನಗೊಳ್ಳುತ್ತಾಳೆ. ಮುಂದಕ್ಕೆ ಬಾಗಿ ನನ್ನ ತುಟಿಗಳ ಮೇಲೆ ಸಮ್ಮತಿಯ ಮುದ್ರೆ ಒತ್ತುತ್ತಾಳೆ. ನನ್ನ ಕಣ್ಣುಗಳಲ್ಲಿ ಇಣುಕುತ್ತಾ "ಈ ಮುತ್ತು ಅದ್ಭುತವಾಗಿದೆಯೇ?" ಎಂದು ಕೇಳುತ್ತಾಳೆ. ಅವಳ ಮುಖ ಕೆಂಪಾಗುತ್ತದೆ. ಅದರಿಂದ ನಿಶ್ಚಯದ ಭಾವಗಳು ತುಳುಕುತ್ತವೆ. "ನಾನು ನಿಜವಾಗಿಯೂ ನಿನ್ನನ್ನು ಇಷ್ಟಪಡುತ್ತೇನೆ" ಎಂದು ಉಸುರುತ್ತಾ ಅವಳನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ. ಅವಳು ಬಳ್ಳಿಯಂತೆ ನನ್ನನ್ನು ಸುತ್ತುವರಿಯುತ್ತಾಳೆ. ನಾವು ಒಬ್ಬರನ್ನೊಬ್ಬರು ಎಂದಿಗೂ ಅಗಲಲಾರದ ರೀತಿಯಲ್ಲಿ ಪರಸ್ಪರ ತೋಳುಗಳಲ್ಲಿ ಬಂಧಿಸಿಕೊಳ್ಳುತ್ತೇವೆ. ಅವಳು ನನ್ನನ್ನು ಇಷ್ಟಪಡುತ್ತಾಳೆ. ನನಗೆ ಅವಳು ಇಷ್ಟವಾಗುತ್ತಾಳೆ. ಒಂದು ಅನುಬಂಧ ಅಲೆ ಅಲೆಯಾಗಿ ಅನುರಣಿಸುತ್ತದೆ. ಒಂದು ಅನುಪಮ ಬಂಧ ಇದಕ್ಕಿಂತಲೂ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ...

Comments

Popular posts from this blog

🌺ಈ ಕವಿತೆ🌺

ನಿಸರ್ಗದ ಹಾಡು

🌺ಅಮ್ಮ ಹಾಡಿದೊಂದು ಹಾಡು🌺